|
ಸಣ್ಣ ಕಥೆಗಳು
ಅಭಂಗ-೬೦೭
ನಿನ್ನಯ ಮಹಿಮೆಯ ಹಾಡಲು ಮನದಲಿ
ಸಂತಸ ಮೂಡುವುದು |
ಪ್ರೀತಿಯ ಅಪ್ಪುಗೆಯಂದದಿ ಬಾಯಿ
ಚಪ್ಪರಿಸುವುದು ||೧||
ಹಕ್ಕಿಯೊಂದು ತನ್ನ ಮರಿಯೊಂದಿಗೆ
ಮರದಮೇಲೆ ಕುಳಿತಿತ್ತು |
ಅಲ್ಲಿಗೆ ಬಂದ ಬೇಡನಿಗದು ಕಂಡಿತು
||ಪ||
ಹದ್ದು ಹೆದರಿ ಮುಗಿಲಿಗೆ ನೆಗೆಯಿತು
|
ಬೇಡನ ಬಾಣವು ಹಕ್ಕಿಗೆ ಗುರಿ
ಇಕ್ಕಿತು ||೨||
ಆಗ ಆ ಹಕ್ಕಿಗಳು ನಿನ್ನನು ನೆನೆದವು
|
ಶ್ರೀಹರಿ ಧಾವಿಸಿ ಬಾರಪ್ಪ ಎಂದವು
||೩||
ಮುಗಿಲಿಗೆ ನೆಗೆದರೆ ಹದ್ದು
ಹಿಡಿವುದು |
ಮರದ ಮೇಲಿದ್ದರೆ ಬಾಣ ಇರಿವುದು
||೪||
ದೇವನು ಹಕ್ಕಿಗಳ ಮೊರೆಯ ಕೇಳಿದನು
|
ಹಾವಿನ ರೂಪವ ತಾ ತೊಟ್ಟುಕೊಂಡನು
||೫||
ಹಾವು ಬೇಡನ ಕಚ್ಚಿ ಕೆಳಗುರುಳಿಸಿತು
|
ಹೊರಟ ಬಾಣವು ಹದ್ದನಿರಿಯಿತು
||೬||
ನಿನ್ನ ದಾಸರಿಗೆಲ್ಲ ಕೃಪಾಳು ನೀನು
|
ಕಾಪಾಡುವೆ ಸಂಕಟದಿ ಅವರನು ||೭||
ತ್ರಿಭುವನದಲೂ ನಿನ್ನಯ ಕೀರ್ತಿಯನು
|
ಬಣ್ಣಿಸಲಾಗದು ವೇದವಾಣಿಗೂ ತುಕಾ
ಎಂದನು ||೮||
-----------------------------------------------------------------------------------------------
ಅಭಂಗ- ೨೫೪೦
ಕೃಪಾವಂತ ನೀ ದಯಾವಂತನು ಪಾಮರ ನಾನು
|
ಏನೆಂದು ಬಣ್ಣಿಸಲಿ ನಿನ್ನಯ
ಹಿರಿಮೆಯನು ||೧||
ಇನ್ನೆಲ್ಲೂ ಕಾಣಲಾಗದಂತಹ ದಯಾವಂತನು
|
ಒಂದು ಅಚ್ಚರಿಯಾಗಿ ತೋರುವ
ಹೃಷಿಕೇಶ ನೀನು ||ಪ||
ಕುರುಕ್ಷೇತ್ರದಿ ಹಕ್ಕಿಯೊಂದಕ್ಕೆ
ಮರಿ ಹುಟ್ಟಿತು |
ಮರಿಗಾಗಿ ಅದು ಹುಲ್ಲ ಮೆತ್ತೆಯನು
ಒದಗಿಸಿತು ||೨||
ಒಂದು ದಿನ ಅಲ್ಲಿ ರಣಕಂಬವನು
ನೆಡಲಾಯಿತು |
ಆ ಬಯಲನು ರಣಭೂಮಿಯೆಂದು
ಘೋಷಿಸಲಾಯಿತು ||೩||
ಹಿರಿದಾದ ಪಾಂಡವ ಕೌರವ ಪಡೆಗಳವು |
ಕಾಳಗಕೆಂದು ಅಲ್ಲಿಗೆ ಬಂದು ನಿಂತವು
||೪||
ಹೌಹಾರಿದ ಹಕ್ಕಿ ನಿನ್ನನು
ನೆನೆಸಿತು |
ಕಾಪಾಡು ಶ್ರೀಪತಿಯೆ ನಮ್ಮನೆಂದಿತು
||೫||
ಆನೆ ಕುದುರೆಗಳು ಇಲ್ಲಿ ಓಡಾಡಲಿವೆ
|
ಕಾಲಿಗೆ ಸಿಕ್ಕು ಕಲ್ಲುಗಳು
ಹುಡಿಯಾಗಲಿವೆ ||೬||
ಹೇಗೆ ಬದುಕಲಿ ಇಂಥ ಕೋಲಾಹಲದಲಿ |
ಧಾವಿಸಿ ಬಾ ಶ್ರೀಹರಿಯೆ ಬಲು
ಬೇಗದಲಿ ||೭||
ನನ್ನ ಮರಿಯನು ತೊರೆದು
ಇನ್ನೆಲ್ಲಿಗೆ ಹೋಗಲಿ |
ಪ್ರಸನ್ನನಾಗು ಎಲೆ ಜಗನ್ನಾಥ
ಲಗುಬಗೆಯಲಿ ||೮||
ಆಗ ಅನಾಥನಾಥ ನಾರಾಯಣ ನೀನು |
ಆದೆ ಬಲು ಕೃಪಾವಂತನು ||೯||
ಆನೆಯ ಕೊರಳಿಗೆ ನೇತಾಡುವ
ಗಂಟೆಯೊಂದನು |
ಹಗುರಾಗಿ ಕೆಡವಿದೆ ಹಕ್ಕಿಗಳ
ಮೇಲದನು ||೧೦||
ಹದಿನೆಂಟು ದಿನಗಳ ಕಾಳಗ
ನಡೆಯಿತಲ್ಲಿ |
ಹಕ್ಕಿಗಳಿಗೆ ಗಾಳಿ ಬಿಸಿಲುಗಳು
ಕೂಡ ತಾಕಲಿಲ್ಲ ||೧೧||
ಯುದ್ಧ ಮುಗಿದು ನಾರಾಯಣನು |
ಹಕ್ಕಿಗಳನು ಅರ್ಜುನಗೆ ತೋರಿಸಿದನು
||೧೨||
ಕಂಡೆಯ ನನ್ನ ಈ ದಾಸರನು |
ರಣರಂಗದಲೂ ಅವನ್ನು ಕಾಪಾಡಿದೆನು
||೧೩||
ಭಕ್ತರಮೇಲೆ ಮಮತೆಯುಳ್ಳವ ನೀನು |
ನೀನೆನಗೆ ತಾಯಿ ತುಕಾ ಎನ್ನುವನು
||೧೪||
|